ವಾಕಾಟಕರು
 	ಸು. 4-6ನೆಯಶತಮಾನ. ಸಾತವಾಹನ ಅಥವಾ ಆಂಧ್ರ ಭೃತ್ಯರ ಮಾಂಡಲಿಕರಾಗಿದ್ದು ಅನಂತರ ಸ್ವಾತಂತ್ರ್ಯ ಹೊಂದಿದ ರಾಜಮನೆತನ. ಆದರೆ ಮೂಲಸ್ಥಳ, ಆಡಳಿತ ಅವಧಿ ಮುಂತಾದ ವಿಷಯಗಳ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ. ಈ ರಾಜರ ಕೆಲವು ಹೆಸರುಗಳನ್ನು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ವಾಕಾಟಕ ಚರಿತ್ರೆ ಬಗ್ಗೆ ಶಾಸನಗಳು ಮಂದವಾದ ಬೆಳಕನ್ನು ಬೀರುತ್ತವೆ. 

	ಸಾತವಾಹನರ ಪತನಾನಂತರ ದಕ್ಷಿಣದಲ್ಲಿ ನಾಗಾರ್ಜನಕೊಂಡದ ಕಾಕುವಂಶದ ರಾಜರು, ಚುಟುಕುಲಾನಂದರು, ಆಭೀರರು ಸ್ವತಂತ್ರರಾದರು. ದಕ್ಷಿಣಕರಾವಳಿ ಪ್ರದೇಶದಲ್ಲಿ ಕದಂಬರು ಅಸ್ತಿತ್ವದಲ್ಲಿದಾಗ ಮಧ್ಯಪ್ರದೇಶದಲ್ಲಿ ವಾಕಾಟಕರು ತಲೆಯೆತ್ತಿದರು. ಅವರ ಶಾಸನಗಳೆಲ್ಲೆ ಮಧ್ಯಪ್ರದೇಶ ದಕ್ಷಿಣದಲ್ಲಿ ಅಜಂತ ಗುಹೆಗಳಲ್ಲಿ ದೊರೆತಿರುವುದರಿಂದ ವಿಂಧ್ಯಪರ್ವತದ ವಿದರ್ಭ ವಾಕಾಟಕರ ಮೂಲನಿವಾಸವಿದ್ದಿರಬಹುದು. ಆಂಧ್ರರಾಜ್ಯದ ಅಮರಾವತಿಯ ಒಂದು ಶಾಸನದಲ್ಲಿ (3ನೆಯ ಶತಮಾನ) ವಾಕಾಟಕ ಎಂಬ ಪ್ರವಾಸಿಯ ಹೆಸರು ಬಂದಿದೆ. ಇವರ ಮೂಲಪುರಷ ವಿಂಧ್ಯಶಕ್ತಿ. ಇವರು ಸಾತವಾಹನರ ಮಾಂಡಲಿಕರಾದ್ದರಿಂದ ವಾಕಾಟಕರು ದಾಕ್ಷಿಣಾತ್ಯರೆಂದು ಹೇಳಬಹುದು.

	ಇವರು ಗುಪ್ತ ವಿಷ್ಣುಕುಂಡಿ ಮತ್ತು ಕದಂಬ ಅರಸರೊಡನೆ ವೈವಾಹಿಕ ಸಂಬಂಧ ಬೆಳೆಸಿದ್ದರು. ಗುಪ್ತ ಸಾಮ್ರಾಜ್ಯದ 2ನೆಯ ಚಂದ್ರಗುಪ್ತನ (375-414) ಮಗಳು ಪ್ರಭಾವತಿ ಗುಪ್ತ ಎಂಬವಳನ್ನು ವಾಕಾಟಕ 2ನೆಯ ರುದ್ರಸೇನನಿಗೆ ವಿವಾಹ ಮಾಡಲಾಗಿತ್ತು. ಕದಂಬ ಕಾಕುತ್ಸ್ಥವರ್ಮನ ಮಗಳಾದ ಅಜ್ಝಿತಭಟ್ಟಾರಿಕೆಯನ್ನು ಅವನ ಮಗನಾದ ಪ್ರವರಸೇನನಿಗೆ ಕೊಟ್ಟು ಲಗ್ನ ಮಾಡಲಾಗಿತ್ತು. ಈ ಸಮಕಾಲಿಕ ಸಂಬಂಧಗಳಿಂದ ಮತ್ತು ವಾಕಾಟಕರ ಶಾಸನಗಳಿಂದ ಇವರ ಕಾಲವನ್ನು ತಿಳಿಯಬಹುದು. ಪೃಥ್ವೀಷೇಣನನ್ನು ಕುರಿತು ಸಮುದಿತಸ್ಯವರ್ಷಶತಮಭಿ ವರ್ಧಮಾನತೋಷದಣ್ಡ ಸಾಧನಸಂತಾನಪುತ್ರ ಪೌತ್ರಿಣಃ ಎಂದು ಹೇಳಿರುವುದರಿಂದ ಪೃಥ್ವೀಷೇಣ ಪಟ್ಟಕ್ಕೆ ಬರುವಾಗ ವಾಕಾಟಕರು ಉದಯ ಹೊಂದಿ ಒಂದು ನೂರುವರ್ಷಗಳು ಸಂದಿದ್ದವೆಂದು ಹೇಳಿದೆ. ಇವನು ಚಂದ್ರಗುಪ್ತನ ಸಮಾಕಾಲೀನನಾಗಿದ್ದರಿಂದ ಇವರ ಮೂಲಪುರುಷನಾದ ವಿಂಧ್ಯಶಕ್ತಿ ಸು. 255-275ರಲ್ಲಿರಬೇಕೆಂದು ಊಹಿಸಬಹುದು. ಪೃಥ್ವೀಷೇಣನ ತರುವಾಯ ವಾಕಾಟಕ ರಾಜ್ಯ ಚಿಕ್ಕ ಮನೆತನದ ಹರಿಷೇಣನ ವಶಕ್ಕೆ ಹೋಯಿತು. ಶಾಸನಗಳಿಂದ ವಾಕಾಟಕರಲ್ಲಿ ಎರಡು ಮನೆತನಗಳಿದ್ದವೆಂದು ಗೊತ್ತಾಗುತ್ತದೆ. 

	ಸು.550ರಲ್ಲಿ ವಾಕಾಟಕರನ್ನು ಸೋಲಿಸಿ ಚಾಳುಕ್ಯರು ಅವರ ರಾಜ್ಯವನ್ನು ಆಕ್ರಮಿಸಿದರು. ಚಿಕ್ಕ ಮನೆತನದ ರಾಜನಾದ ಹರಿಷೇಣ ಸಮಸ್ತ ವಾಕಾಟಕ ರಾಜ್ಯಕ್ಕೆ ಏಕಾಧಿಪತಿಯಾಗಿ ಆಳುತ್ತಿದ್ದ. ಇವನ ಮಗನ ಮಗಳನ್ನು ಮೊಮ್ಮಗಳು ವಿಷ್ಣುಕುಂಡಿಮನೆತನದ ಮಾಧವವರ್ಮ ಮದುವೆಯಾಗಿದ್ದ. ಹರಿಷೇಣನ ಮೊಮ್ಮಗನ ಕಾಲದಲ್ಲಿ ವಾಕಾಟಕ ಮನೆತನ ಅವನತಿ ಹೊಂದಿತು.

	ವಾಕಾಟಕರ ರಾಜ್ಯವಿಸ್ತಾರ: ಮೂಲಪುರುಷನಾದ ವಿಂಧ್ಯಶಕ್ತಿ ವಿದಿಶಾ, ಪುರಿಶಾ (ವಿದರ್ಭ-ಅಶ್ಮಕ) ಪಟ್ಟಣಗಳಿಂದ ಆಳುತ್ತಿದ್ದ. ವಿದರ್ಭದೇಶ ಮೂಲರಾಜ್ಯವಾಗಿದ್ದರೂ ಮಾಳ್ವ ಕೂಡ ಇವನ ಆಡಳಿತಕ್ಕೆ ಒಳಪಟ್ಟಿತ್ತು. ಪರಾಕ್ರಮದಿಂದ ರಾಜ್ಯವನ್ನು ವಿಸ್ತರಿಸಿ ಸಾಮ್ರಾಜ್ಯಸೂಚಕವಾದ ನಾಲ್ಕು ಅಶ್ವಮೇಧಯಾಗಗಳನ್ನು ಮಾಡಿದ. ಇವನ ರಾಜ್ಯ ದಕ್ಷಿಣದಲ್ಲಿ ಕೋಸಲ, ಬಾಗೇಲಖಂಡ, ಮಾಳ್ವ ಗುಜರಾತ್, ಕಾಠೇವಾಡ, ದಕ್ಷಿಣ ಹಿಂದೂಸ್ತಾನದ ಉತ್ತರಭಾಗಗಳನ್ನು ಒಳಗೊಂಡಿತ್ತು. ಈ ವಿಸ್ತಾರವಾದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ತನ್ನ ನಾಲ್ಕು ಜನ ಮಕ್ಕಳನ್ನು ತನ್ನ ಪ್ರತಿನಿಧಿಗಳೆಂದು ನೇಮಿಸಿದ. ಹಿರಿಯಮಗನಾದ ಗೌತಮೀಪುತ್ರ ಮರಣ ಹೊಂದಿದ್ದರಿಂದ ಎರಡನೆಯ ಮಗ ಸರ್ವಸೇನ ಬಾಸಿಮ್‍ಶಾಖೆಯನ್ನು ಸ್ಥಾಪಿಸಿ ಸ್ವತಂತ್ರನಾದ. 2ನೆಯ ಪ್ರವರಸೇನನ ಕಾಲದಲ್ಲಿ ರಾಜ್ಯ ಮತ್ತಷ್ಟು ವಿಸ್ತಾರವಾಯಿತಲ್ಲದೆ, ಪ್ರವರಪುರ ಎಂಬ ಹೊಸರಾಜಧಾನಿಯನ್ನು (ಈಗಿನ ಪವನೂರು, ವಾರ್ಧಾಜಿಲ್ಲೆ) ಸ್ಥಾಪಿಸಿದ. ಶಾಸನಗಳ ಪ್ರಕಾರ ಈಗ ವಾಕಾಟಕ ರಾಜ್ಯ ಅಮರಾವತಿ, ವಾರ್ಧಾ, ಬೆತುಲ, ವಿಂಧವಾರ, ನಾಗಪುರ, ಭಂದರ ಮತ್ತು ಬಾಲಘಾಟಜಿಲ್ಲೆಗಳನ್ನೊಳಗೊಂಡಿತ್ತೆಂದು ತಿಳಿಯುತ್ತದೆ. ಬಾಸಿಮ್ ಶಾಖೆಯ ಅಧೀನ ದಕ್ಷಿಣ ವಿದರ್ಭ ಹೈದರಾಬಾದ್ ಮತ್ತು ದಕ್ಷಿಣ ಮಹಾರಾಷ್ಟ್ರದ ಪ್ರದೇಶಗಳು ಇದ್ದವು. ಹರಿಷೇಣನ ಕಾಲದಲ್ಲಿ ಎರಡು ಮನೆತನಗಳ ರಾಜ್ಯಗಳು ಒಂದೇ ಆಡಳಿತಕ್ಕೆ ಒಳಪಟ್ಟವು. ಅಜಂತ ಶಾಸನದ ಪ್ರಕಾರ ಇವನು ಕುಂತಲ, ಅವಂತಿ, ಲಾಟ, ಕೋಸಲ, ಕಳಿಂಗ, ಆಂಧ್ರ ರಾಜ್ಯಗಳನ್ನು ಜಯಿಸಿದನೆಂದು ಉಲ್ಲೇಖಿಸಲಾಗಿದೆ. ಹರಿಷೇಣನ ಕಾಲದಲ್ಲಿ ಔನ್ನತ್ಯಕ್ಕೇರಿದ ಸಾಮ್ರಾಜ್ಯ ಸ್ವಲ್ಪ ಸಮಯದಲ್ಲಿ ಪರರ ವಶವಾಯಿತು.

	ವಾಕಾಟಕರ ಧರ್ಮ: ಸುಂಗ, ಕಣ್ವ, ಸಾತವಾಹನರಂತೆ ವಾಕಾಟಕರು ಬ್ರಾಹ್ಮಣರು, ವಿಷ್ಣುವೃದ್ಧಗೋತ್ರದವರು. 2ನೆಯ ಚಂದ್ರಗುಪ್ತನೊಂದಿಗೆ ಸಂಬಂಧ ಬೆಳೆದಮೇಲೆ ಇವರು ವಿಷ್ಣುಭಕ್ತರಾದಂತೆ ತಿಳಿಯುತ್ತದೆ. ಶಾಸನಗಳಲ್ಲಿ ಮಹಾಭೈರವ ಭಕ್ತರೂ ಅತ್ಯಂತಮಾಹೇಶ್ವರರೂ ಎಂದು ವರ್ಣಿಸಲ್ಪಟ್ಟಿದ್ದಾರೆ. ಪ್ರಬಲರಾದ ರಾಜರು ಸಾಮ್ರಾಟ, ಮಹಾರಾಜ ಎಂಬ ಬಿರುದುಗಳನ್ನು ಧರಿಸುತ್ತಿದ್ದರು. ಯುಜ್ಞಯಾಗಾದಿಗಳ ಮೂಲಕ ವೈದಿಕಧರ್ಮವನ್ನು ಪ್ರಚಾರಗೊಳಿಸಿದರು. ಪ್ರವರಸೇನನು ಬೃಹಸ್ಪತಿಸ್ತವ, ಅಶ್ವಮೇಧ, ಅಗ್ನಿಷ್ಟೋಮ, ಅಪ್ತೋರ್ಯಾಮ, ಉಕ್ಥ್ಯ, ಷೋಡಶಿ, ಅತಿರಾತ್ರ ಮತ್ತು ವಾಜಪೇಯ ಯಾಗಗಳನ್ನು ಮಾಡಿದ್ದನೆಂದು ಶಾಸನಗಳಿಂದ ತಿಳಿಯತ್ತದೆ. ಈತ ಕವಿಗಳಿಗೆ ಆಶ್ರಯ ಕೊಟ್ಟಿದ್ದಲ್ಲದೆ ತಾನೇ ಸೇತುಬಂಧಕಾವ್ಯವನ್ನು ಸಂಸ್ಕøತದಲ್ಲಿ ರಚಿಸಿದ. ಕಾಳಿದಾಸ ಈ ಕಾವ್ಯವನ್ನು ಓದಿ ತಿದ್ದಿಕೊಟ್ಟನೆಂದು ಪ್ರತೀತಿ. ಚಂದ್ರಗುಪ್ತನ ಮಗಳಾದ ಪ್ರಭಾವತಿಗುಪ್ತಳನ್ನು ರುದ್ರಸೇನನಿಗೆ ವಿವಾಹಮಾಡಿಸಲು ಸಂಧಾನಕ್ಕೆಂದು ವಾಕಾಟಕ ಪೃಥ್ವೀಷೇಣನ ಆಸ್ಥಾನಕ್ಕೆ ಬಂದಿದ್ದನೆಂದು, ವಿಷಯ ಕುಂತಲೇಶ್ವರದೌತ್ಯ ಎಂಬ ಕಾವ್ಯದಿಂದ ತಿಳಿಯಬರುತ್ತದೆ. ಈ ಕುಂತಲೇಶ್ವರ ಕದಂಬ ಕಾಕುತ್ಸ್ಥವರ್ಮನಿರಬೇಕೆಂದು ಹೇಳಲಾಗುತ್ತದೆ.			
		(ಆರ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ